ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಇತ್ತೀಚೆಗೆ ತಂದೆಯಾಗಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇದೀಗ ಮಗಳಿಗೆ ಸರಳವಾಗಿ ಕುಟುಂಬಸ್ಥರ ಮಧ್ಯೆ ನಾಮಕರಣ ಶಾಸ್ತ್ರ ಮಾಡಿದ್ದಾರೆ.
ಮುದ್ದಾದ ಪುಟ್ಟ ಲಕ್ಷ್ಮೀಯನ್ನು ಬಿಳಿ ಬಣ್ಣದ ಬಟ್ಟೆಯ ತೊಟ್ಟಿಲಿಗೆ ಹಾಕುವ ಮೂಲಕ ತೊಟ್ಟಿಲು ಶಾಸ್ತ್ರವನ್ನು ಅರ್ಥಪೂರ್ಣವಾಗಿ ಮಾಡಿದ್ದಾರೆ. ರಾಮ್ ಚರಣ್ ಕುಟುಂಬಸ್ಥರು ಮಗಳ ನಾಮಕರಣವನ್ನು ಸಖತ್ ಅದ್ದೂರಿಯಾಗಿ ಮಾಡಲಿದ್ದಾರೆ ಎಂದು ಅಂದುಕೊಂಡವರಿಗೆ ಮೆಗಾ ಕುಟುಂಬ ಸಿಂಪಲ್ ಆಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.
ರಾಮ್ ಚರಣ್ ಹಾಗೂ ಉಪಾಸನಾ ಮಗುವಿನ ನಾಮಕರಣ ಮಾಡಿರುವ ಶಾಸ್ತ್ರದ ಫೋಟೋಸ್ ಶೇರ್ ಮಾಡಿದ್ದು ಮಗಳಿಗೆ ಕ್ಲಿನ್ ಕಾರ ಕೊನಿಡೇಲಾ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.
ಎಲ್ಲರೂ ವೈಟ್ ಹಾಗೂ ಕ್ರೀಮ್ ಕಲರ್ ಬಟ್ಟೆ ಧರಿಸಿದ್ದರು. ಉಪಾಸನಾ ಅವರು ಸೀರೆ ಉಟ್ಟು ಗ್ರ್ಯಾಂಡ್ ಆಭರಣವನ್ನು ಧರಿಸಿದ್ದರು. ಚಿರಂಜೀವಿ ಖುಷಿಯಿಂದ ಮೊಮ್ಮಗಳನ್ನು ನೋಡುತ್ತಿರುವುದು ಫೋಟೋದಲ್ಲಿ ಕಂಡು ಬಂದಿದೆ.
ಕ್ಲಿನ್ ಕಾರ ಕೊನಿಡೇಲಾ ಜೊತೆ ಅಜ್ಜ-ಅಜ್ಜಿಯಂದಿರುವ ಫೋಟೋಗೆ ಪೋಸ್ ಕೊಟ್ಟರು. ಹಿಂದೂ ಸಂಪ್ರದಾಯಕ್ಕೆ ಅನುಗುಣವಾದ ಹೆಸರು ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಕ್ಲಿನ್ ಕಾರಾ ಎಂಬುದು ವಿದೇಶಿ ಹೆಸರಿನಂತೆ ಕೇಳುತ್ತದೆಯಾದರೂ ಹೆಸರಿನ ಹಿಂದೆ ಒಂದು ವಿಶೇಷತೆ ಇದ್ದು ಇದನ್ನು ಸ್ವತಃ ಉಪಾಸನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕ್ಲಿನ್ ಕಾರಾ ಎಂಬ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ. ಕ್ಲಿನ್ ಕಾರಾ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ ಹಾಗೂ ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ ಎಂದು ವಿವರಣೆ ನೀಡಿದ್ದಾರೆ ಉಪಾಸನಾ.
ಉಪಾಸನಾ ಕೋನಿಡೆಲಾ, ಅಧ್ಯಾತ್ಮಕದ ಬಗ್ಗೆ, ಪಾಸಿಟಿವಿಟಿ ಬಗ್ಗೆ ಆಸಕ್ತಿವುಳ್ಳವರಾಗಿದ್ದಾರೆ. ಆಗಾಗ್ಗೆ ಅಧ್ಯಾತ್ಮದ ವಿಷಯಗಳನ್ನು, ಪಾಸಿಟಿವಿಟಿ ಬಗ್ಗೆ, ದೇಹಾರೋಗ್ಯ, ಮಾನಸಿಕ ಆರೋಗ್ಯದ ಬಗ್ಗೆ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ರಾಮ್ ಚರಣ್ ಸಹ ಅಧ್ಯಾತ್ಮದಲ್ಲಿ ಪಾಸಿಟಿವ್ ಎನರ್ಜಿಯಲ್ಲಿ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದರು ಇಬ್ಬರೂ ಸೇರಿ ತಮ್ಮ ಆಲೋಚನೆಗಳಿಗೆ ಹೊಂದುವ ಹೆಸರನ್ನೇ ಮಗಳಿಗೆ ಇರಿಸಿದ್ದಾರೆ.
‘ಕ್ಲೀಂಕಾರೀ’ ಹೆಸರು ಲಲಿತಾ ಸಹಸ್ರನಾಮದ 125 ನೇ ಪಾದದಲ್ಲಿ ಬರುತ್ತೆ, ಅದರಿಂದಲೇ ಸ್ಪೂರ್ತಿ ಪಡೆದು ಕ್ಲಿನ್ ಕಾರಾ ಎಂದು ಮಗಳಿಗೆ ಹೆಸರಿಟ್ಟಿದ್ದಾರೆ ರಾಮ್-ಉಪಾಸನಾ.