ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹೆಚ್ಚು ಸುದ್ದಿ ಆಗಿದ್ದೇ ಡ್ರಗ್ಸ್ ಕೇಸ್ ಕುರಿತಾಗಿ. ಡ್ರಗ್ ಕೇಸ್ ನಲ್ಲಿ ಒಂದಷ್ಟು ದಿನಗಳ ಕಾಲ ಜೈಲಿನಲ್ಲಿದ್ದು ಬಂದ ಆರ್ಯನ್ ಇದೀಗ ಕೆಲಸದ ಕಡೆ ಗಮನ ಹರಿಸಿದ್ದಾರೆ. ತಾವು ಸಿನಿಮಾ ಲೋಕಕ್ಕೆ ಕಾಲಿಡಲು ಸಜ್ಜಾಗಿರುವ ಕುರಿತು ಆರ್ಯನ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಆರ್ಯನ್ ಖಾನ್ ತಮ್ಮ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಆರ್ಯನ್ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿಲ್ಲ. ಬದಲಿಗೆ, ನಿರ್ದೇಶಕನಾಗಿ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ.
ಆರ್ಯನ್ ಖಾನ್ ಸ್ಟಾರ್ ಕಿಡ್ ಆಗಿರೋದ್ರಿಂದ ಹೀರೋ ಆಗುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಆರ್ಯನ್ ಖಾನ್ ಗೆ ನಟನೆಗಿಂತಲೂ ನಿರ್ದೇಶನದಲ್ಲಿ ಹೆಚ್ಚು ಆಸಕ್ತಿ ಇದೆ. ಹಾಗಾಗಿ ಕ್ಯಾಮೆರಾ ಹಿಂದೆ ನಿಂತು ಕೆಲಸ ಮಾಡಲು ಸಜ್ಜಾಗಿದ್ದಾರೆ. ತಮ್ಮ ಮೊದಲ ಪ್ರಾಜೆಕ್ಟ್ಗೆ ಸ್ಕ್ರಿಪ್ಟ್ ಬರೆದು ಮುಗಿಸಿದ್ದಾರೆ. ಅದರ ಫೋಟೋ ಹಂಚಿಕೊಂಡು ಈ ಸುದ್ದಿ ನೀಡಿದ್ದಾರೆ.
ಸ್ಕ್ರಿಪ್ಟ್ ಬರೆದು ಮುಗಿಸಿರುವ ಆರ್ಯನ್ ಖಾನ್ ಅವರು ಈಗ ಆ್ಯಕ್ಷನ್-ಕಟ್ ಹೇಳುವ ಕಾತರದಲ್ಲಿದ್ದಾರೆ. ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಸಂಸ್ಥೆ ಮೂಲಕ ಈ ಪ್ರಾಜೆಕ್ಟ್ ನಿರ್ಮಾಣ ಆಗಲಿದೆ. ಆದರೆ ಯಾರೆಲ್ಲ ನಟಿಸಲಿದ್ದಾರೆ? ತಾಂತ್ರಿಕ ವರ್ಗದಲ್ಲಿ ಯಾರು ಕೆಲಸ ಮಾಡಲಿದ್ದಾರೆ? ಯಾವ ಪ್ರಕಾರದ ಸಿನಿಮಾ ಎಂಬುದನ್ನು ಮಾತ್ರ ಆರ್ಯನ್ ಬಿಟ್ಟು ಕೊಟ್ಟಿಲ್ಲ.
ಆರ್ಯನ್ ಖಾನ್ ಅವರು ಇತ್ತೀಚೆಗೆ ಬಿ-ಟೌನ್ ಸೆಲೆಬ್ರಿಟಿಗಳ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ತಂದೆಯ ಅನೇಕ ಉದ್ಯಮಗಳಲ್ಲೂ ಅವರು ಆಸಕ್ತಿ ವಹಿಸುತ್ತಿದ್ದಾರೆ. ಡ್ರಗ್ಸ್ ಪ್ರಕರಣದ ಕಹಿ ಘಟನೆಯನ್ನು ಮರೆತು ಮುಂದೆ ಸಾಗುತ್ತಿದ್ದಾರೆ. ಮಗನ ಸಿನಿಜರ್ನಿಗೆ ತಂದೆ ಶಾರುಖ್ ಖಾನ್ ಹಾಗೂ ತಾಯಿ ಗೌರಿ ಖಾನ್ ಬೆಂಬಲವಾಗಿ ನಿಂತಿದ್ದಾರೆ.