ಸೆಪ್ಟೆಂಬರ್ ೩ ಭಾನುವಾರದಂದು ಕಬ್ಬನ್ ಪಾರ್ಕಿನಲ್ಲಿ ಯುವ ಕವಿ ಚೇತನ್ ಗವಿಗೌಡ ಅವರ “ಪೋಸ್ಟ್ ಬಾಕ್ಸ್” ಕವನ ಸಂಕಲನವು ಅಪರಿಚಿತ ಓದುಗರ ನಡುವೆ c/o ಚಾರ್ಮಾಡಿ ಖ್ಯಾತಿಯ ಕಥೆಗಾರ ಸಚಿನ್ ತೀರ್ಥಹಳ್ಳಿ, ಹಾಗೂ ಡ್ರಾಮಾ ಕಂಪನಿ ಖ್ಯಾತಿಯ ಕಥೆಗಾರ ರಾಜೇಶ್ ಶೆಟ್ಟಿ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು. ದಯವಿಟ್ಟು ಗಮನಿಸಿ ಹಾಗೂ ಅಪರಿಚಿತ ಓದುಗರು ತಂಡದ ರೂವಾರಿ ಅನಂತ ಕುಣಿಗಲ್ ಅವರು ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.
ಅಪರಿಚಿತ ಓದುಗರ ಭೇಟಿಯಿಂದ ನನಗೆ ಮತ್ತಷ್ಟು ಸ್ಪೂರ್ತಿ ಸಿಕ್ಕಿದೆ-ಎಂದರು ಸಚಿನ್ ತೀರ್ಥಹಳ್ಳಿ. ಕಥೆಗಾರ ಹಾಗೂ ಓದುಗರ ನಡುವೆ ಸೇತುವೆಯಾಗಿರುವ ಅಪರಿಚಿತ ಓದುಗರ ತಂಡವನ್ನು ಪ್ರಶಂಸಿಸಿದರು. ಯುವಕವಿ ಚೇತನ್ ಗವಿಗೌಡ ಅವರ ಪೋಸ್ಟ್ ಬಾಕ್ಸ್ ಕವನ ಸಂಕಲನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪಿನಾಕಿ ಪುಸ್ತಕ ಪ್ರಕಾಶನದ ಆಶಯಗಳಿಗೆ ಶುಭಕೋರಿದರು.
ನಮ್ಮನ್ನು ನಾವು ಹುಡುಕಿಕೊಳ್ಳಲು ಪುಸ್ತಕಗಳು ಸಹಾಯ ಮಾಡುತ್ತವೆ ನಾವು ಪುಸ್ತಕಗಳ ಕೈ ಹಿಡಿಯಬೇಕಷ್ಟೆ ಎಂದು ಕಥೆಗಳ ಉದಾಹರಣೆಯ ಮೂಲಕ ಎಲ್ಲರ ಗಮನ ಸೆಳೆದಿದ್ದು ರಾಜೇಶ್ ಶೆಟ್ಟಿ ಅವರು.
ಅಪರಿಚಿತರ ಬಳಗದಲ್ಲಿ ಶ್ರೀಯುತ ಚಿರಂಜೀವಿಯವರು ತಮ್ಮ ಮಗುವಿನ ಜೊತೆಗೆ ಬಂದು ಪುಸ್ತಕ ಓದುತ್ತಿದ್ದರು. ಮಕ್ಕಳಿಗೆ ತಂದೆತಾಯಿಯರ ಚಟುವಟಿಕೆಗಳ ಬಗ್ಗೆ ಗಮನವಿರಬೇಕು ನಮ್ಮನ್ನು ನೋಡಿ ಅವರು ಓದುವುದರಲ್ಲಿ ಆಸಕ್ತಿ ಕಂಡುಕೊಳ್ಳುತ್ತಾರೆ ಹಾಗೆಯೇ ನನ್ನ ತಂದೆಯಿಂದ ಪ್ರೇರಿತಗೊಂಡು ಇಂದು ನಾನು ಪುಸ್ತಕಗಳನ್ನು ಓದುತ್ತಿದ್ದೇನೆ ಎಂದರು.
ಓದಲೆಂದು ಮನೆಗೆ ತರುವ ಕಥೆ, ಕಾದಂಬರಿಗಳು ನನ್ನ ಕೈಗೆ ಸಿಗುವುದೇ ಇಲ್ಲ. ನನ್ನ ಮಗಳು ಓದಿ ಮುಗಿಸಿದ ಮೇಲೆ ನನಗೆ ಸಿಗುತ್ತವೆ. ಒಂಬತ್ತನೇ ತರಗತಿಯ ಮಗಳು ಕಾಲ್ ಮಾಡಿ ದಶಕಂಠ ರಾವಣ ಪುಸ್ತಕದ ಬಗ್ಗೆ ಚರ್ಚೆ ಮಾಡುತ್ತಾಳೆ. ಹಸ್ತಿನಾವತಿಯನ್ನು ಒಂದೂವರೆ ದಿನದಲ್ಲಿ ಓದಿ ಮುಗಿಸಿದ್ದಾಳೆ. ಈಗಿನ ಮಕ್ಕಳಿಗೆ ಪಠ್ಯಪುಸ್ತಕಗಳ ಜೊತೆಗೆ ಸಾಹಿತ್ಯವನ್ನು ಓದಲು ಕೊಡಬೇಕು. ಸಾಹಿತ್ಯದ ಓದಿನಲ್ಲಿ ಅದರ ಗ್ರಹಿಕೆಯಿಂದ ಮಕ್ಕಳಿಗೆ ಪಠ್ಯಗಳ ಮೇಲು ಆಸಕ್ತಿ ಹೆಚ್ಚುತ್ತದೆ. ಮುಂದೆ ಅವರೇ ಸಾಹಿತ್ಯವನ್ನು ಬೆಳಸಬೇಕಾಗಿರೋದು . ಇಲ್ಲಿ ಬಹುತೇಕ ಯುವಕ ಯುವತಿಯರೇ ಬಂದಿದ್ದೀರಾ ಬಹಳ ಖುಷಿ ಆಯ್ತು. ಎಂದರು ಕಥೆಗಾರರಾದ ಡಾ. ಮಾರುತಿ ಎ ಎನ್.
ಅಪರಿಚಿತ ಓದುಗರ ಸಂವಾದದಲ್ಲಿ ತಿಳಿದುಬಂದಿದ್ದು ಏನೆಂದರೆ ಬಹುತೇಕ ಎಲ್ಲಾ ಓದುಗರ ಓದು ತೇಜಸ್ವಿಯವರಿಂದಲೇ ಶುರುವಾಗಿದೆ. ಪ್ರಕೃತಿಯ ನಡುವೆ ತೇಜಸ್ವಿಯವರನ್ನು ನೆನಪಿಸಿಕೊಂಡು ಪಿನಾಕಿಪುಸ್ತಕದ ಮೂರನೇ ಪ್ರಕಟಣೆ; ಚೇತನ್ ಗವಿಗೌಡ ಅವರ ಚೊಚ್ಚಲ ಕೃತಿ ಪೋಸ್ಟ್ ಬಾಕ್ಸ್ ವಿಳಾಸ ಸೇರದ ಕವಿತೆಗಳು ಲೋಕಾರ್ಪಣೆಗೊಂಡಿದ್ದೆ ಈ ದಿನದ ವಿಶೇಷ.
ಪುಸ್ತಕ ಬಿಡುಗಡೆಯಲ್ಲಿ ಪ್ರಕಾಶಕರಾದ ಪಿನಾಕಿ ಶಿವಾಗ್ ,ಡಾ.ಮಾರುತಿ ಎ ಎನ್, ನಾರಾಯಣ ಸ್ವಾಮಿ, ಶಾರದಾ ಮೂರ್ತಿ, ಮಧು ಅಕ್ಷರಿ, ಮಹೇಶ್ ಅರಬಳ್ಳಿ, ರಮೇಶ್ ಶೆಟ್ಟಿಗಾರ್, ಸಾಹಿತ್ಯಮೈತ್ರಿ ಚಂದ್ರು, ಕಾವ್ಯ ಪುನೀತ್, ವೀಣಾ ಎಸ್ ಕೆ, ಹೇಮಂತ್ ಶೃಂಗನಾಡು,ಸಂಜಯ್ ಶೆಟ್ಟಿ ಕೇರಳಾಪುರ ಮತ್ತಿತರು ಉಪಸ್ಥಿತರಿದ್ದರು.