ನನ್ನನ್ನು ದೂರುವುದಾದರೆ ದೂರಿ ಬಿಡು ಕಂಡವರೆದುರು ದೂರಬೇಡ
ದೂರವಿರಿಸುವೆಯಾದರೆ ಇರಿಸಿಬಿಡು ಎಲ್ಲರಿಂದ ದೂರ ಮಾಡಬೇಡ
ಪ್ರೀತಿಸುವೆಯಾದರೆ ಧಮನಿ ಧಮನಿಗಳಲಿ ಒಲವ ಧಾರೆ ಹರಿಸು ಬಾ
ನನ್ನ ಕಂಡರಾಗದಿರೆ ನಿನ್ನಲ್ಲೇ ಇರಲಿ ಜಗತ್ತಿಗೆಲ್ಲ ಡಂಗುರ ಸಾರಬೇಡ
ಮೊಲ್ಲೆ ಕಂಪನರಸಿ ದುಂಬಿ ಝೇಂಕರಿಸುವ ಹಿತ್ತಿಲಲಿ ದ್ವೇಷವಿಹುದೇ
ಚೂರು ನಲವಾದರೆ ಜೊತೆ ಹೆಜ್ಜೆ ಹಾಕು ನೆವ ಹುಡುಕಿ ಹೋಗಬೇಡ
ಹರಿವ ನದಿ ದಂಡೆಯ ಇಕ್ಕೆಲಗಳಲಿ ಮೊಳಗುವ ಕಲರವಕೆ ತಡೆಯಿಲ್ಲ
ನಮ್ಮ ನಡುವಿನ ಭಾವಗಳ ಜತನ ಮಾಡು ಲೋಕಕೆಲ್ಲ ತೂರಬೇಡ
ತೊನೆವ ಗಾಳಿ ಸುರಿವ ಮುಗಿಲು ಮಿಂಚೋ ದಿಗಂತದಿ ಕುಂದಿಹುದೇ
ಎನ್ನೆಲ್ಲ ಅವಗುಣಗಳ ನಿನ್ನೊಡಲಲಿರಿಸು ಸುತ್ತಲೂ ಹಂಚಿ ನಗಬೇಡ
ಮುಸ್ಸಂಜೆ ರಂಗು ಮುಂಜಾನೆ ಗುಂಗು ನಡುಹಗಲ ದಂಗೆಲ್ಲವೂ ಚಂದ
ಸರಿ ತಪ್ಪುಗಳ ಪಟ್ಟಿ ಬೇಡ ಇದ್ದಂತೆ ಒಪ್ಪು, ಬಯಲಿಗೆನ್ನ ದೂಡಬೇಡ
ಎನ್ನ ಹರಾಜು ಹಾಕಿ ಚಪ್ಪಾಳೆ ತಟ್ಟಲು ಮಂದಿ ಮಾಗಧರ ಮೇಳವೇಕೆ
“ಸುಜೂ” ನೆಚ್ಚಿಹಳು ನಿನ್ನ , ಬೇಡದಿರೆ ಸುಮ್ಮನಿರು ನೋವ ಕೊಡಬೇಡ