ಚೂರು ತಿರುಗಿ ನೋಡು ಅಂಗಳದಿ ನೀನೇ ಗೀಚಿದ ನನ್ನ ಹೆಸರಿದೆ
ತುಸು ಕಣ್ಣಲ್ಲಿ ಕಣ್ಣಿಟ್ಟು ಹೋಗು ಕಣ್ಣೆವೆಯ ಕೆಳಗೆ ನಿನ್ನ ನಲವಿದೆ
ಕಳಚಿ ಬಿದ್ದ ಕನಸಿನೆಳೆಯಲ್ಲೂ ಬೆರೆತ ಬೆವರ ಸೌಗಂಧದ ಗಮವಿದೆ
ಹಾಗೇ ಸನಿಹ ಬಂದು ಕೇಳಿಲ್ಲಿ ಎನ್ನುಸಿರ ಆಳದಿ ಒಲವ ಗುನುಗಿದೆ
ಗುಲ್ಮೊಹರ್ ಬೀದಿಯಲಿ ಭುಜಕೆ ಭುಜ ಆನಿಸಿ ಸೆರೆಯಾದವ ನೀನು
ಇನಿತೇಕೆ ಮುನಿಸು ಕಾಣಿಲ್ಲಿ ನೀನಿತ್ತು ಹೋದ ಮುತ್ತಿನ್ನೂ ಮತ್ತಲ್ಲಿದೆ
ನಮ್ಮೊಲುಮೆ ಪಯಣದಲಿ ಹುಸಿ ಕೋಪ ತರವಲ್ಲ ಮರಳಿ ಬಾ ಬೇಗ
ಮೊಗ್ಗರಳಿ ಮುಂಜಾನೆ ಕಿರಣ ತಬ್ಬಿ ನಗುವಂಥ ಹರೆಯವೇ ನನ್ನಲ್ಲಿದೆ
ನಿನ್ನೆಡೆಗೆ ಹೊರಟ ಎನ್ನೊಳಗಿನ ಭಾವ ಬಿಂದುವಿಗೀಗ ಮೈಯೆಲ್ಲ ಪುಳಕ
ಕೆನ್ನೆ ಅಧರಗಳಲಿ ಲಜ್ಜೆಯದೇ ಲಾಸ್ಯ ನೋಡಿಲ್ಲಿ ಸಂಜೆಗೂ ಸೊಕ್ಕೇರಿದೆ
ಕಡಲ ಮೊರೆತ, ಸಿಡಿಲಬ್ಬರ ಕುಳಿರ್ಗಾಳಿಗೇನು ಗೊತ್ತು ಎನ್ನೆಲ್ಲ ತವಕ
ಬಾ ಜೊತೆಗೆ ಸಾಗೋಣ ಉಳಿದ ದಾರಿಯ ಗುಂಟ ಆಸೆ ಬಾನಾಗಿದೆ
ಕವನವಾಗುತ “ಸುಜೂ” ಹುದುಗಬೇಕೆಂದಿಹಳು ನಿನ್ನ ತೋಳ್ತೆಕ್ಕೆಯಲಿ
ಕಥೆಯಾಗಿಸಬೇಡ ಎನ್ನ: ಸಂಚಿತ ನೆನಪ ರಾಶಿಯ ನವಿರು ಗುಂಗಲ್ಲಿದೆ