ಬಾಹ್ಯ ಸೌಂದರ್ಯ ಎಂದಿಗೂ ಶಾಶ್ವತವಲ್ಲ. ಕಾಲ ಉರುಳುತ್ತಿದ್ದಂತೆ ಸೌಂದರ್ಯ ಮಾಸುತ್ತದೆ. ಆದ್ದರಿಂದ ಎಂದಿಗೂ ಮನುಷ್ಯನ ಬಾಹ್ಯ ನೋಟವ ನೋಡಿ ಆ ವ್ಯಕ್ತಿಯ ರೂಪರೇಷೆಯನ್ನು ಲೇವಡಿ ಮಾಡದಿರಿ. ನೀವು ಒಬ್ಬ ವ್ಯಕ್ತಿಯ ಬಾಹ್ಯ ಸೌಂದರ್ಯವನ್ನು ಮಾತ್ರ ಆರಾಧಿಸುತ್ತಾ ಬಂದರೆ, ಖಂಡಿತ ನಿಮ್ಮ ಪ್ರೀತಿ-ವಿಶ್ವಾಸ ಶಾಶ್ವತವಾಗಿ ಉಳಿಯದು.
ಆಂತರಿಕ ಸೌಂದರ್ಯ ಗುರುತಿಸುವತ್ತ ಗಮನಹರಿಸಬೇಕು. ಯಾರದೋ ಕಣ್ಣು ಸರಿಯಿಲ್ಲ, ಮೂಗು ಸರಿಯಿಲ್ಲ, ಕಿವಿ ಸರಿಯಿಲ್ಲ ಎಂದೆಲ್ಲಾ ವ್ಯಕ್ತಪಡಿಸಿದರೆ, ಅದರಲ್ಲಿ ಆ ವ್ಯಕ್ತಿಯದೇನು ತಪ್ಪು ಹೇಳಿ? ಅವರ ಚೆಲುವನ್ನು ಅವರೇ ರೂಪಿಸಿಕೊಂಡು ಹುಟ್ಟಿರುವುದಿಲ್ಲವಲ್ಲ!! ಅದು ಅವರ ತಂದೆತಾಯಿಯ ಬಳುವಳಿ ಹಾಗೂ ವಂಶವಾಹಿಯ ಪ್ರಭಾವ. ಈ ಲೋಕದಲ್ಲಿ ಮನುಷ್ಯನಾಗಿ ಹುಟ್ಟುವುದೇ ಶ್ರೇಷ್ಠ ಎಂತಿರಬೇಕಾದರೆ, ಇನ್ನು ಈ ಬಾಹ್ಯನೋಟಕ್ಕೆಲ್ಲಾ ಬೆಲೆ ಕಟ್ಟಬಹುದೇ!!
ಮನುಷ್ಯನ ಬಾಹ್ಯ ಸೌಂದರ್ಯ ನಶಿಸಿದರೂ, ಶಾಶ್ವತವಾಗಿ ಉಳಿಯುವುದು ಆ ವ್ಯಕ್ತಿ ತಾನು ಬೆಳೆಸಿಕೊಂಡು ಬಂದಿರುವ ‘ವ್ಯಕ್ತಿತ್ವ ಹಾಗೂ ತಾನು ರೂಪಿಸಿಕೊಂಡ ಆಂತರಿಕ ಸೌಂದರ್ಯ ಮಾತ್ರ.’ ಹಾಗಾಗಿ ಪ್ರತಿಯೊಬ್ಬ ಜೀವಿಯೂ ತನ್ನ ಅಮೂಲ್ಯ ಕ್ಷಣಗಳನ್ನು ಅನವಶ್ಯಕ ವಿಚಾರಗಳಿಗೆ ಸಮಯ ಪೋಲು ಮಾಡುವುದು ಸಲ್ಲದು.
ನಾವು-ನೀವೆಲ್ಲರೂ ಸಾಮಾಜಿಕ ಜಾಲ ತಾಣ(fb/instagram)ಗಳಲ್ಲಿ ನೋಡುವ ವ್ಯಕ್ತಿಗಳ ಚಿತ್ರಪಟಗಳಿಗೆ ಮಾರುಹೋಗುತ್ತೇವೆ. ಆದರೆ ಮುಖತಃ ಅವರನ್ನು ಭೇಟಿಯಾದಾಗ ಭ್ರಮನಿರಸನವಾಗಬಹುದು. ಸಿನಿಮಾ ತಾರೆಯರನ್ನು ನೋಡಿ, ತಾವೂ ಹಾಗೆಯೇ ಕಾಣಬೇಕೆಂದು ಇಂದು ಅನುಕರಿಸುವವರೇ ಹೆಚ್ಚು. ಸ್ವಲ್ಪ ಯೋಚಿಸಿ.., ಆ ತಾರೆಯರ ವೃತ್ತಿಯೇ ಅಂತಹದ್ದು. ಅವರು ಪರದೆಯ ಮೇಲೆ ಸದಾ ಸುಂದರವಾಗಿ ಕಾಣಿಸಿಕೊಳ್ಳುವ ಒತ್ತಡ ಹಾಗೂ ಪೈಪೋಟಿ ಇರುವುದರಿಂದ ತಮ್ಮ ಸೌಂದರ್ಯ ಇಮ್ಮಡಿಗೊಳಿಸಿಕೊಳ್ಳಲು ಲಕ್ಷಗಟ್ಟಲೆ ಹಣ ಖರ್ಚು ಮಾಡಿರುತ್ತಾರೆ. ಬಹುತೇಕ ನಟ-ನಟಿಯರು ತಮ್ಮ
ದೇಹದ ಅಂಗಾಗಗಳನ್ನು ತಿದ್ದಿಕೊಳ್ಳಲು ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಾರೆ. ಅವರನ್ನು ನೋಡಿ ಜನಸಾಮಾನ್ಯರು ತಾವೂ
ಹಾಗೆಯೇ ಕಾಣಬೇಕೆಂದು ಹವಣಿಸುವುದು ಮೂರ್ಖತನದ ಪರಮಾವಧಿ. ನೋಡಲು ಸಾಧಾರಣವಾಗಿರುವವರೂ ಇಂದಿನ ಆಧುನಿಕ ಫ್ಯಾಷನ್ ಪರಿಕರಗಳನ್ನು ಉಪಯೋಗಿಸಿ ತಮ್ಮ ಬಾಹ್ಯ ಸೌಂದರ್ಯವನ್ನು ಸಾಕಷ್ಟು ಮಟ್ಟಿಗೆ ಸುಧಾರಿಸಿಕೊಳ್ಳಬಹುದು.
ಇದೆಲ್ಲಾ ಬಿಡಿ. ನಮ್ಮೊಳಗಿನ ಆಂತರಿಕ ಸೌಂದರ್ಯದ ಬಗ್ಗೆ ಯೋಚಿಸಿದ್ದೀರಾ? ಅದನ್ನು ಸುಧಾರಿಸಿಕೊಳ್ಳಲು ನೀವೆಲ್ಲಾ
ಪ್ರಯತ್ನಪಡುತ್ತಿರುವಿರೇ? ಮನುಷ್ಯನ ಜೀವಿತಾವಧಿ ಕಳೆದ ನಂತರವೂ ಲೋಕದ ಬಾಯಲ್ಲಿ ಹರಿದಾಡುವುದು ‘ಆ ವ್ಯಕ್ತಿಯ
ವ್ಯಕ್ತಿತ್ವ’ ಮಾತ್ರ ಎಂಬುದನ್ನು ಅರಿಯಬೇಕು.
ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಬಲವಾದ ‘ಶಕ್ತಿ’ ಅಡಕವಾಗಿರುತ್ತದೆ. ಕೆಲವರು ಆ ಶಕ್ತಿಯನ್ನು ತಮ್ಮೊಳಗೆ ಗುರುತಿಸಿಕೊಂಡು ಅದನ್ನೇ ದಾಳವಾಗಿ ಉಪಯೋಗಿಸಿಕೊಂಡು ಜೀವನದ ಪಥದಲ್ಲಿ ಮೇಲೇರುತ್ತಾರೆ. ಮತ್ತೊಂದು ವರ್ಗಕ್ಕೆ ತಮ್ಮ ಅಗೋಚರ ಶಕ್ತಿ ಗುರುತಿಸಿಕೊಳ್ಳಲಾರದೆ ತಮ್ಮ ಅಳಲನ್ನು ತಮ್ಮೊಳಗಿನ ಮೌನದ ಚಿಪ್ಪಿನೊಳಗೆ ಬಂಧಿಯಾಗಿಸಿ ತಾವೂ ಹತ್ತರಲ್ಲೊಬ್ಬರಂತೆ ಜೀವಿಸುತ್ತಾರೆ. ನಿಮ್ಮಲ್ಲೇ ಗುಪ್ತವಾಗಿರುವ ’ಶಕ್ತಿಯುತ ವ್ಯಕ್ತಿತ್ವವನ್ನು’ ನೀವೇ ಕೂಲಂಕಷವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಿ. ಅದನ್ನು ಹೊರಗೆಳೆದು ಪೋಷಿಸಿ, ಬೆಳೆಸಿ. ನಿಮ್ಮ ಕನಸು, ಗುರಿಯನ್ನು ಮುಟ್ಟುವ ಕಡೆ ಸಾಗುತ್ತಲಿರಿ. ಮುಳ್ಳಿನ ಹಾದಿಯಲ್ಲಿ ಸೋಲುಗಳಾಗುವುದು ಸಹಜ. ಹೊರಗಿನ ಶತ್ರುಗಳನ್ನು ಹೇಗೋ ನಿಭಾಯಿಸಬಹುದು. ಆದರೆ ನಿಮ್ಮೊಳಗಿನ ಶತ್ರುಗಳಾದ-ಕೋಪ, ಸ್ವಾರ್ಥ, ಅಸೂಯೆ, ಹೇಡಿತನ, ಆತಂಕ, ಅಭದ್ರತೆ, ಮೈಗಳ್ಳತನ, ಸ್ವಯಂ ನಿಂದನೆ, ಸ್ವಯA ಕರುಣೆ-ಮೊದಲು ಇವೆಲ್ಲವನ್ನೂ ನಿಗ್ರಹಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಧೈರ್ಯಗೆಡದೆ ನಿಮ್ಮ ಗುರಿಯನ್ನು ಸಾಕಾರಗೊಳಿಸುವತ್ತಲೇ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಅಚಲವಾದ ನಂಬಿಕೆಯಿರಲಿ. ನೀವು ಪ್ರಖ್ಯಾತ ವ್ಯಕ್ತಿಗಳಾಗಲೇಬೇಕೆಂದಿಲ್ಲ. ನಿಮ್ಮ ವ್ಯಕ್ತಿತ್ವವೇ ನಿಮ್ಮನ್ನು ಪ್ರಖ್ಯಾತಿಯ ಶಿಖರಕ್ಕೆ
ಕೊಂಡೊಯ್ಯುತ್ತದೆ. ಒಟ್ಟಿನಲ್ಲಿ ನಿಮ್ಮ ವ್ಯಕ್ತಿತ್ವ ನಿಮಗೆ ಆತ್ಮತೃಪ್ತಿ ಕೊಡುವಂತಿರಬೇಕು.
ಕೆಲವರು ತಮ್ಮ ಶಕ್ತಿಯನ್ನು ಗುರುತಿಸಲಾರದೆ ಪರರ ವ್ಯಕ್ತಿತ್ವದಿಂದ ಆಕರ್ಷಿತರಾಗಿ, ಅವರಂತೆಯೇ ಜೀವಿಸಲು ಹೆಣಗುತ್ತಾರೆ.
ತಾವು ಒಂದು ಕಪ್ಪೆಚಿಪ್ಪು. ತಮ್ಮೊಳಗೆ ಒಂದು ’ಸುಂದರವಾದ ಮುತ್ತು ಅಡಗಿದೆ’ ಎಂಬುದನ್ನೇ ಗುರುತಿಸಿಕೊಳ್ಳದಾಗಿರುತ್ತಾರೆ.
ಲೋಕದ ಟೀಕೆ, ಅವಮಾನ, ಅವಹೇಳನಗಳು ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದು. ಅವುಗಳನ್ನು ಅರಗಿಸಿಕೊಳ್ಳಲು ಕಲಿಯಿರಿ. ಲೋಕದ ಬಾಯಿ ನಿಲ್ಲದು. ನಿರಂತರವಾಗಿ ಜರಿಯುವುದೇ ಕೆಲವರ ಜೀವನದ ಗುರಿಯಾಗಿರುತ್ತದೆ. ನಿಮಗೆ ನೋವು ಕೊಟ್ಟು ವಿಕೃತ ಆನಂದ ಪಡುವ ಹಿಂಸಾರಸಿಕರು (sadist) ನಿಮ್ಮ ಸುತ್ತಮುತ್ತಲೇ ಆವರಿಸಿಕೊಂಡಿರುತ್ತಾರೆ. ಅಂತಹವರ ಮಾತಿಗೆ ಕಿವಿಗೊಡದೆ, ಮನಸ್ಸು ಕೆಡಿಸಿಕೊಳ್ಳದೆ ನಿಮ್ಮ ಧ್ಯೇಯದತ್ತ ಮುನ್ನುಗುತ್ತಲಿರಿ. ನೀವು ಏನು ಮಾಡಿದರೂ ಲೋಕದ ಬಾಯಿ ಮುಚ್ಚಿಸಲಾಗದು ಎಂದ ಮೇಲೆ…ಈ ಲೋಕದ ಗೊಡವೆ ನಿನಗೇತಕೋ ಮನುಜ!!