ಪ್ರಭಾವಳಿಗಳಿಲ್ಲದ
ಅಂತರಂಗದೊಳಗಿಳಿದು
ಅಲ್ಲೇ ಉಳಿದು
ನಾನತ್ವ ಅಳಿದು
ನಿನ್ನನ್ನೇ ನೀನು ಧ್ಯಾನಿಸು
ಅದೇ ಆಧ್ಯಾತ್ಮ
ಅದೇ ಪರಮಾತ್ಮ
ಅದೇ ಚೈತನ್ಯ
ಎಷ್ಟು ಪದರಗಳಿವೆಯೋ ನಿನ್ನೊಳಗೆ
ಪರದೆ ಸರಿಸಿ ನೋಡು
ಯಾವುದು ನಿನ್ನ ಜಾಡು ?
ಮೌನದೊಳಗಿನ ಹಾಡು !
ಆಲಿಸು- ಪಾಲಿಸು
ನಿನ್ನನ್ನು ನೀನೇ ಸೋಲಿಸು
ಗೆಲುವಿಗೆ ಹತ್ತಿರವಾಗಲು
ಇದಕಿಂತ ಮಾರ್ಗವಿಲ್ಲ.
ನಿನ್ನೊಳಗಿನೊಳಗಿಗಿಂತ
ಸ್ವರ್ಗವಿಲ್ಲ.
ಒಳಗಿನ ಕಣ್ಣು-ದೃಷ್ಟಿ
ನೋಡಲಿ ಸಮಷ್ಟಿ
ಹರಿಯಬಿಡು ದಿಗಂತದ ತನಕ
ನಿರಾಳವಾಗು.
ನಿಲ್ಲಿಸು.
ಅಂತರ್ಯುದ್ಧ-ತವಕ.
ರೆಪ್ಪೆಯಾಚೆ ಹೋಗಲಿ
ಅರಿಷಡ್ವರ್ಗದ ನೀಲಿ
ಕಣ್ಣುಗಳಿಗಿರಲಿ
ಒಳಗಿಳಿದು ನೋಡುವ ಖಯಾಲಿ
ನಿನ್ನ ಸಂಯಮದ ಬೇರುಗಳು
ನಿನ್ನನ್ನೇ ಕಟ್ಟಿಹಾಕಲಿ
ಸುಲಭವಲ್ಲ ಖಾಲಿಯಾಗುವುದು
ಖಾಲಿಯಿರುವುದು ಮಾತ್ರ
ತುಂಬಿಕೊಳ್ಳಬಲ್ಲದು
ಬೇಗ ಖಾಲಿಯಾಗು
ತುಂಬಿಕೊಳ್ಳಲು ಅಣಿಯಾಗು.
– ಡಾ ವಿ ನಾಗೇಂದ್ರ ಪ್ರಸಾದ್